ಕಡಲ ತೋಳ : ಉತ್ತರವಲಯ ಸಮುದ್ರದಲ್ಲಿ ವಾಸಿಸುವ ಬಹು ದೊಡ್ಡ ಮೀನು (ಸೀ ಮುಲ್ಫ್‌). ವೈಜ್ಞಾನಿಕ ನಾಮ ಅನಾರಿಕಸ್.  ದೇಹ 6 ಅಡಿ ಉದ್ದವಿದೆ.  ಚರ್ಮ ಜಾರುವಂತೆ ನಯವಾಗಿದ್ದು ಅದರ ಮೇಲೆ ಅಪುರ್ಣ ಪೊರೆಗಳಿವೆ.  ಬೆನ್ನಿನ ಈಜುರೆಕ್ಕೆ ದೇಹದ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೂ ಬೆಳೆದಿದೆ.  ಹೊಟ್ಟೆಯ ಈಜುರೆಕ್ಕೆ ಬಾಲದ ವರೆಗೂ ವಿಸ್ತರಿಸಿದೆ.  ಎದೆಯ ಮುಂಭಾಗದ ಈಜುರೆಕ್ಕೆ ದೊಡ್ಡದಾಗಿ ಗುಂಡಾಗಿದೆ. ಎದೆಯ ಹಿಂದಿನ ಈಜುರೆಕ್ಕೆ ಇಲ್ಲ. ಬಾಯಿಯಲ್ಲಿ ಬಲವಾಗಿರುವ ಮತ್ತು ಬಾಗಿರುವ ಹಲ್ಲುಗಳೂ ಎರಡು ಸಾಲು ದೊಡ್ಡ ರವೆಗಂತಿಗಳುಳ್ಳ ದವಡೆ ಹಲ್ಲುಗಳೂ ಇವೆ. ಬಾಯಂಗಳದ ಮಧ್ಯೆ ಅದೇ ತೆರನಾದ 2 ಸಾಲು ಹಲ್ಲುಗಳಿವೆ. ಅತ್ಯಂತ ಕ್ರೂರವಾದ ಪ್ರಾಣಿ ಎಂದು ಪ್ರಖ್ಯಾತವಾಗಿರುವ ಇದು ತನ್ನ ಹಲ್ಲುಗಳ ಸಹಾಯದಿಂದ ವಲ್ಕವಂತ ಪ್ರಾಣಿ ಮತ್ತು ಮೃದ್ವಂಗಿಗಳ ಗಟ್ಟಿಯಾದ ಚಿಪ್ಪುಗಳನ್ನು ಒಡೆದು ತಿಂದುಹಾಕುತ್ತದೆ. ಆದ್ದರಿಂದಲೇ ಇದಕ್ಕೆ ಕಡಲ ತೋಳ ಎಂದು ಹೆಸರು.            (ಎಸ್.ಎನ್.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ